ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Department of Information and Public Relations

N R Vishu Kumar
Director
Department of information and Public Relations

ಬರಗಾಲದ ಬೆನ್ನು ಹತ್ತಿ . . .

ಏಪ್ರಿಲ್ ತಿಂಗಳು ಬಂದಿದೆ. ರಾಜ್ಯಾದ್ಯಂತ ಉರಿ ಬಿಸಿಲು . ಬೇಸಿಗೆಯ ಬಿಸಿಲಿಗೆ ಕುಖ್ಯಾತಿಯಾಗಿದ್ದ ಬಳ್ಳಾರಿ, ರಾಯಚೂರು, ಕಲಬುರಿಗಿಯಲ್ಲಿ ಈಗಾಗಲೇ ಬಿಸಿಲು 40 ಡಿಗ್ರಿ ದಾಟಿದೆ. ಕೆಲವು ದಿನ 42 ,43 ಡಿಗ್ರಿ ಕೂಡಾ ದಾಖಲಾಗಿದೆ. ಸಾಮಾನ್ಯವಾಗಿ ಕಡಿಮೆ ಉಷ್ಣಾಂಶ ಇರುತ್ತಿದ್ದ ಬೆಂಗಳೂರಿನಲ್ಲಿ ಕೂಡ ಬೇಸಿಗೆ ಬಿಸಿಲು 34 ಡಿಗ್ರಿ ದಾಟಿದೆ. ಇನ್ನೂ ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಿಸಿಲು 38 ಡಿಗ್ರಿಯ ಹತ್ತಿರ ಸುಳಿದರೂ ಆಶ್ಚರ್ಯವಿಲ್ಲ. ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಕೂಡ ಈಗಾಗಲೇ 35 ಡಿಗ್ರಿಯ ಹತ್ತಿರ ಸುಳಿದಾಡುತ್ತಿವೆ.

'ಯಾತಕ್ಕೆ ಮಳೆ ಹೋದವೋ ಶಿವ, ಶಿವ .... ' ಎಂದು ಕೇಳಿದರೆ ಉತ್ತರ ನಮ್ಮ ಬಳಿಯೇ ಇದೆ.ಹವಾಮಾನ ಬದಲಾಗುತ್ತಿದೆ.ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಪ್ರಕೃತಿಯ ಸಂಪನ್ಮೂಲಗಳನ್ನು ನಾವು ವಿವೇಚನೆ ಇಲ್ಲದೆ ಅಂದಾದುಂದಿಯಾಗಿ ಬಳಸುತ್ತಿದ್ದೇವೆ. ಮೂರೂ ಕೊಡ ನೀರು ಬಳಸುವಲ್ಲಿ ಆರು ಕೊಡ ನೀರನ್ನು ಎಗ್ಗಿಲ್ಲದೆ ಬಳಸುತ್ತಿದ್ದೇವೆ. ಅರಣ್ಯ ಉತ್ಪನ್ನಗಳ ಬಳಕೆಗೆ ನಾವು ಮಿತಿಯನ್ನೇ ಹಾಕಿ ಕೊಂಡಿಲ್ಲ. ನಮ್ಮ ಸುಖ ಜೀವನಕ್ಕಾಗಿ ಪ್ರಕೃತಿಯ ಸಂಪನ್ಮೂಲವನ್ನು ಸೂರೆ ಹೊಡೆದು ಬರಿದು ಮಾಡುತ್ತಿದ್ದೇವೆ .

ಪ್ರಕೃತಿ ಮಾತೆಯ ಮೇಲಿನ ಆಕ್ರಮಣಕ್ಕೆ ಬೆಲೆ ತೆರುವ ದಿನಗಳು ಬಹಳ ದೂರವಿದೆಯೆಂದು ಈವರೆಗೂ ನಾವು ಭಾವಿಸಿದ್ದೆವು. ಆದರೆ ಈಗ ಅದು ನಾವಂದು ಕೊಂಡಿದ್ದಕ್ಕಿಂತಲೂ ಮುಂಚೆಯೇ ನಮ್ಮ ಮನೆಯ ಬಾಗಿಲ ಬಳಿ ಬಂದು ನಿಂತಿದೆ. ಮುಂದಾಲೋಚನೆ ಇಲ್ಲದೆ ನನ್ನ ಸಂಪತ್ತನ್ನು ಸೂರೆ ಹೊಡೆದ ನೀವು ಈಗ ಅದಕ್ಕೆ ಬೆಲೆ ತೆತ್ತು ಪಶ್ಚಾತ್ತಾಪ ಪಡಿರಿ ಎಂದು ಪ್ರಕೃತಿ ಮಾತೆ ಮುನಿದು ನಿಂತಿದ್ದಾಳೆ.

ಈಗ ನಾವು ಮಾಡಿದ ತಪ್ಪಿಗೆ ದಂಡ ತೆತ್ತು , ಕ್ಷಮೆ ಕೇಳಿ , ತಪ್ಪೊಪ್ಪಿಕೊಂಡು ನಮ್ಮ ಪ್ರಕೃತಿಯನ್ನು ಇನ್ನಷ್ಟು ದಷ್ಟ ಪುಷ್ಟ ಮಾಡಿ ಮುಂದಿನ ತಲೆಮಾರಿಗೆ ವರ್ಗಾಯಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.

ಹಿಂದೆ ನಮ್ಮ ನಮ್ಮ ಹಳ್ಳಿಗಳಲ್ಲಿ ಸಣ್ಣ ಪುಟ್ಟ ಹಳ್ಳ ಕೊಳ್ಳಗಳಿರುತ್ತಿದ್ದವು. ಬೇಸಿಗೆಯಲ್ಲಿ ಕೂಡ ಅಲ್ಲಿ ,ಅಲ್ಪ ಸ್ವಲ್ಪ ನೀರು ಇರುತಿತ್ತು. ಮುಂದಿನ ಮಳೆಗಾಲ ಎಟುಕಿಸಿಕೊಳ್ಳುವವರೆಗೆ ನಾವು ಅದನ್ನು ಜೋಪಾನದಿಂದ ಬಳಸಿಕೊಳ್ಳುತ್ತಿದ್ದೆವು. ಆದರೆ ಈಗ ಏನಾಗಿದೆ? ಇನ್ನು ಬೇಸಿಗೆ ಕಾಲದ ಹೊಸ್ತಿಲಿನಲ್ಲಿ ಇರುವಾಗಲೇ ನಮ್ಮ ಎಲ್ಲಾ ಜಲ ಮೂಲಗಳು ಬತ್ತಿ ಹೋಗಿವೆ. ಮೇಲಾಗಿ ಬಿಸಿ ಗಾಳಿ ಬೀಸುತ್ತಿದೆ.ಮುಂದಿನ ಎರಡು ತಿಂಗಳನ್ನು ಹೇಗೆ ಕಳೆಯಬೇಕು ಎಂಬುದೇ ತಿಳಿಯುತ್ತಿಲ್ಲ. ನೀರು ದುಡ್ಡು ಕೊಟ್ಟು ಕೊಂಡುಕೊಳ್ಳುವ ಸಂಪನ್ಮೂಲವಲ್ಲ. ಅದನ್ನು ಉತ್ಪಾದನೆ ಮಾಡುವುದು ಸಹ ಕಾರ್ಯ ಸಾಧುವಲ್ಲ. ಏನು ಮಾಡುವುದು? ಮುನಿಸಿಕೊಂಡಿರುವ ಪ್ರಕೃತಿ ಮಾತೆಯನ್ನು. ಪ್ರಾರ್ಥಿಸಿ ಮಳೆ ತರಲೂ ಸಾಧ್ಯವಿಲ್ಲ. ಇರುವ ಅಲ್ಪ ಸ್ವಲ್ಪ ಜಲವನ್ನು ಮುಂದಿನ ಮಳೆಗಾಲದವರೆಗೆ ಜತನದಿಂದ ಬಳಸಿ ಕೊಳ್ಳುವುದಷ್ಟೇ ನಮಗೆ ಉಳಿದಿರುವ ಏಕೈಕ ಮಾರ್ಗ.

ಮಾಡಿದ್ದುಣ್ಣೋ ಮಹರಾಯ ಎನ್ನುವ ನಾಣ್ಣುಡಿ ನೆನಪಾಗುತ್ತಿದೆ. ಮಾಡಿರುವ ತಪ್ಪನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಆ ತಪ್ಪನ್ನು ಮತ್ತೆ ಮಾಡುವುದಿಲ್ಲ ಎನ್ನುವ ಸಂಕಲ್ಪ ತೊಟ್ಟು ಇಂದಿನಿಂದಲೇ ಕಾರ್ಯ ತತ್ಪರರಾದರೆ ಮಾತ್ರ ಮುಂದಿನ ದಿನಗಳು ನಮಗೆ ಆಶಾದಾಯಕವಾಗಲಿವೆ. ಇಲ್ಲದಿದ್ದರೆ ಕುಡಿಯುವ ನೀರಿಗಾಗಿ ನಾವು ನಮ್ಮ ನಮ್ಮಲ್ಲೇ ಬಡಿದಾಡಿ ಸಾಯುವ ದಿನಗಳು ಬಹಳ ದೂರವೇನಿಲ್ಲ.

ನಾಡಿನಲ್ಲಿರುವ ನಮ್ಮ ಪಾಡಿರಲಿ ; ಕಾಡಿನಲ್ಲಿರುವ ಪ್ರಾಣಿಗಳನ್ನು ಕಾಪಾಡುವವರು ಯಾರು? ನೀರಿಗಾಗಿ ನಾಡಿನ ಕಡೆಗೆ ಮುಖ ಮಾಡಿ ಬರುತ್ತಿರುವ ಪ್ರಾಣಿಗಳ ಪರಿಸ್ಥಿತಿ ನೀಡಿದರೆ ಕರುಳು ಚುರುಕ್ಕೆನ್ನುತ್ತದೆ.ನೀರಿಲ್ಲದೆ ಬಾಯಾರಿ ಜೀವ ಕಳೆದು ಕೊಂಡಿರುವ ಜಿಂಕೆಯ ಕಣ್ಣಿನಲ್ಲಿ ಕಾಣುವ ಆರ್ದ್ರತೆಯ ನೋಟವನ್ನು ನೋಡಿದರೆ ಕಣ್ಣ ಅಂಚಿನಲ್ಲಿ ನೀರು ಜಿನುಗುತ್ತದೆ . ಅರಣ್ಯದಲ್ಲಿಯೇ ಮಹಾಕಾಯವಾಗಿರುವ ಕಾಡಾನೆಯು ಕೃಶವಾಗಿ ಮೂಳೆ ಚಕ್ಕಳ ಬಿಟ್ಟುಕೊಂಡು ಮಂಡಿಯೂರಿ ನೀರಿಗಾಗಿ ಅಂಗಲಾಚುವ ದೃಶ್ಯ ನೋಡಿದರೆ ಮರುಕ ಹುಟ್ಟುತ್ತದೆ. ನಮ್ಮ ದರ್ಪದ ಬದುಕಿಗಾಗಿ ಮೂಕ ಪ್ರಾಣಿಗಳು ಬಲಿಯಾಗುತ್ತಿರುವುದನ್ನು ನೋಡಿದರೆ ನಮಗೆ ನಾವೇ ನಾಚಿ ತಲೆ ತಗ್ಗಿಸಬೇಕು.ನಾವು ಕ್ಷಮೆಗೆ ಅಹ್ರತೆಯನ್ನೇ ಹೊಂದಿಲ್ಲವೆನಿಸುತ್ತದೆ. ಇದು ಅತಿರೇಕದ ಮಾತು ಎಂದು ಅನ್ನಿಸಲೂ ಬಹುದು. ಆದರೆ ಕೆಲವು ಹಿರಿಯ ಪರಿಸರ ತಜ್ಞರು ಹೇಳುವಂತೆ ನಾವು ಅರಣ್ಯದ ಕಡೆಗೆ ತಲೆ ಹಾಕದಿದ್ದರೆ ಪ್ರಕೃತಿಯೇ ತನ್ನ ಸುರಕ್ಷತೆಯನ್ನು ತಾನೇ ಮಾಡಿ ಕೊಳ್ಳುತ್ತದೆಯಂತೆ. ನಾವು ಕನಿಷ್ಠ ಪಕ್ಷ ಅದನ್ನಾದರೂ ಮಾಡಬಹುದೇ?

ನಿರ್ದೇಶಕರ
ನೋಟ

ಅದ್ಭುತ ವಾಗ್ಮಿ: ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು

ಇಂದು ನಾನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವ ಈ ಮಾತುಗಳು ಬಹಳ ದಿನಗಳಿಂದ ನನ್ನ ಮನಸ್ಸಿನ ಮೂಲೆಯಲ್ಲಿ ಬೆಚ್ಚಗೆ ಕುಳಿತು ಕಾವು ಪಡೆದು ಕೊಳ್ಳುತ್ತಿದ್ದವು. ಕಳೆದ ವಾರ ಮಾನ್ಯ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕದ ಮಂಡನೆ ಸಮಯದಲ್ಲಿ ಮತ್ತು ವಿಧಾನ ಸೌಧದ ಮುಂದೆ 78 ಸಂಚಾರಿ ಅರೋಗ್ಯ ಘಟಕಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿದ್ದ ಅವರ ವಾಕ್ ಶೈಲಿಯ ಬಗೆಗಿನ ಮೆಚ್ಚುಗೆಯ ಮೊಟ್ಟೆಗಳು ಕವಚ ಒಡೆದುಕೊಂಡು ರೆಕ್ಕೆ ಪುಕ್ಕದೊಡನೆ ಪುಟ್ಟ ಪುಟ್ಟ ಮುದ್ದು ಮರಿಗಳಾಗಿ ಹೊರಬಂದು ಹೀಗೆ ಮಾತಿನ ರೂಪದಲ್ಲಿ ನಿಮ್ಮ ಮುಂದೆ ನಲಿದಾಡುತ್ತಿವೆ.

ವಿಡಿಯೋವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ನಿಮಗೆಲ್ಲಾ ತಿಳಿದಿರುವಂತೆ ನಮ್ಮ ಮುಖ್ಯಮಂತ್ರಿಗಳು ಒಬ್ಬ ಅಪರೂಪದ ವಾಗ್ಮಿ .ಅವರ ಮಾತಿನ ಶೈಲಿ ಅದ್ಭುತ. ಅವರ ಮಾತಿನ ಮೋಡಿ ವರ್ಣನಾತೀತ. ಹಾವಾಡಿಗನ ಪುಂಗಿಗೆ ಹಾವು ತಲೆದೂಗುವಂತೆ ಅವರ ಮುಂದೆ ಕೂತವರು ಅವರ ಮಾತುಗಳಿಗೆ ತಲೆದೂಗಲೇ ಬೇಕು. ಅವರು ಅಂತಹ ಅದ್ಬುತ ಮಾತುಗಾರ. ವಚನ ಸಾಹಿತ್ಯದ ಮೇರು ಪ್ರತಿಭೆ ಬಸವಣ್ಣನವರೇ ಹೇಳಿದ ಶೈಲಿಯಲ್ಲಿ ಹೇಳುವುದಾದರೆ " ಲಿಂಗ ಮೆಚ್ಚಿ ಅಹುದಹುದು ಎನುವಂತಿರಬೇಕು " ಎನ್ನುವಂತೆ ಇರುತ್ತದೆ ಅವರ ಮಾತುಗಾರಿಕೆಯ ವೈಖರಿ.

ನಾನು ಗಮನಿಸಿರುವಂತೆ ಕೆಲವರಿಗೆ ಅದ್ಬುತ ವಾಕ್ ಚಾತುರ್ಯ ಇರುತ್ತದೆ. ಆದರೆ ಅವರ ಕೀರಲು ,ಮೆದು ಅಥವಾ ಕರ್ಕಶ , ಗೊಗ್ಗರು ಧ್ವನಿ ಅವರಿಗೆ ಕೈ ಕೊಡುತ್ತಿರುತ್ತದೆ.ಇನ್ನು ಕೆಲವರು ಪ್ರಕಾಂಡ ಪಂಡಿತರಾಗಿರುತ್ತಾರೆ. ಆದರೆ ಸಮರ್ಥ ವಾದ ಮಂಡನೆಯ ಶೈಲಿ ಅವರ ಕೈ ಹಿಡಿದಿರುವುದಿಲ್ಲ. ಇನ್ನು ಕೆಲವರಿಗೆ ಉತ್ತಮ ಧ್ವನಿ, ವಾದ ಮಂಡನಾ ಶೈಲಿ , ಉತ್ತಮ ವೇದಿಕೆ ಇರುತ್ತದೆ. ಆದರೆ ತಾವು ಮಂಡಿಸುತ್ತಿರುವ ವಿಷಯದ ಬಗ್ಗೆ ಅವರಿಗೇ ವಿಶ್ವಾಸ , ನಂಬಿಕೆ ಇರುವುದಿಲ್ಲ.ಇನ್ನು ಕೆಲವರಿಗೆ ಎಲ್ಲವೂ ಇರುತ್ತದೆ. ಆದರೆ ಅವರಿಗೆ ನಿಂತು ಮಾತಾಡುವ ಅತ್ಯುನ್ನತ ವೇದಿಕೆ , ಸ್ಥಾನಮಾನಗಳಿರುವುದಿಲ್ಲ. ಆದರೆ ಇವೆಲ್ಲವೂ ಏಕಕಾಲಕ್ಕೆ ನಮ್ಮ ಮುಖ್ಯಮಂತ್ರಿಗಳಲ್ಲಿ ಮೇಳೈವಿಸಿವೆ .

ನಮ್ಮ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತುಗಾರಿಕೆಗೆ ಮುಖ್ಯವಾಗಿ ಬೇಕಿರುವ ಗಟ್ಟಿಯಾದ ,ಗಡುಸು ಧ್ವನಿಯಿದೆ.ಸಂದರ್ಭವನ್ನರಿತು ಧ್ವನಿ ಏರಿಳಿತ ಮಾಡುವ ಹಾಗೂ ಹಾವ -ಭಾವ ವ್ಯಕ್ತ ಪಡಿಸುವ ಅದ್ಬುತ ಕಲೆಗಾರಿಕೆ ಅವರ ಕೈ ಹಿಡಿದಿದೆ .ಸರಳವಾಗಿ , ನೇರವಾಗಿ ವಿಷಯ ಮಂಡಿಸುವ ಶೈಲಿ ಅವರಿಗೆ ಸಿದ್ದಿಸಿದೆ. ತಾವು ಮಂಡಿಸುವ ವಿಷಯದ ಬಗ್ಗೆ ಅವರಿಗೆ ಅಪಾರವಾದ ನಂಬಿಕೆ , ವಿಶ್ವಾಸವಿದೆ . ಇವೆಲ್ಲಕ್ಕೂ ಕಳಶವಿಟ್ಟಂತೆ ನಾಡಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಅವರಿದ್ದಾರೆ . ವಿಷಯ ಮಂಡಿಸಲು ರಾಜ್ಯದ ಅತ್ಯುನ್ನತ ವೇದಿಕೆಗಳಾದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳೇ ಅವರಿಗೆ ದಕ್ಕಿವೆ.

ಅವರು ಅಪರೂಪದ ವಾಗ್ಮಿ, ಅದ್ಭುತ ಮಾತುಗಾರ ಎನ್ನುವುದಕ್ಕೆ ಇನ್ನೇನು ಬೇಕು. ಈ ಕಿರು ಲೇಖನದ ಜೊತೆ ಅವರು ಸದನದಲ್ಲಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮಂಡನೆಯ ಸಂದರ್ಭದಲ್ಲಿ ಮತ್ತು ಸಂಚಾರಿ ಅರೋಗ್ಯ ಘಟಕ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಸಂದರ್ಭದಲ್ಲಿ ಮಾತನಾಡಿರುವ ದೃಶ್ಯಾವಳಿಗಳನ್ನು ಅಂಟಿಸಿದ್ದೇನೆ. ಲೇಖನ ಓದಿ ದೃಶ್ಯಾವಳಿಗಳನ್ನು ನೋಡಿದ ನಂತರ ಸಿದ್ದರಾಮಯ್ಯನವರ ವಾಕ್ ಚಾತುರ್ಯದ ಬಗ್ಗೆ ನಿಮ್ಮ ನಿಮ್ಮ ನಿಲುವನ್ನು ನೀವೇ ನಿರ್ಧರಿಸಿಕೊಳ್ಳಿ .

ವಿಡಿಯೋವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭೆಗಳ ಸಂಗಮ :ವಾರ್ತಾ ಇಲಾಖೆ

ನನಗೆ ಹೆಮ್ಮೆಯಾಗುತ್ತದೆ ನಮ್ಮ ಇಲಾಖೆ ಪ್ರತಿಭೆಗಳ ಸಂಗಮವೆಂದು ಅಭಿಜಾತ ಕಲಾವಿದರ ಪೊರೆದ ತಾಣವೆಂದು ನಾಡಿನ ಮುನ್ನಡೆಯ ಡಂಗುರ ಬಾರಿಸಿದ ಶಿವನೆಂದು ನೆನಪುಗಳ ಜತನದಿ ಕಾಪಿಟ್ಟ ಭಂಡಾರವೆಂದು..

ನಿನ್ನೆ ನಮ್ಮ ಇಲಾಖೆಯ ಹಲವಾರು ಸಹೋದ್ಯೋಗಿಗಳು ಕವನ ರಚನೆಯ ತಮ್ಮ ಪ್ರತಿಭೆಯನ್ನ ವಾಟ್ಸ್ ಆಪ್ ವೇದಿಕೆಯ " ವಾರ್ತಾ ಸಮೂಹ" ದಲ್ಲಿ ಪರಿಚಯಿಸಿದ್ದರು.ಅದನ್ನು ಓದಿದ ನಂತರ ಇಲಾಖೆಯ ಪ್ರತಿಭೆ ಮತ್ತು ಪ್ರತಿಭಾನ್ವಿತರ ಬಗ್ಗೆ ನನಗೆ ಹೆಮ್ಮೆಯೆನಿಸಿತು. ಅದಕ್ಕಾಗಿ ಈ ವಾರದ ಅಂಕಣವನ್ನು " ವಾರ್ತಾ ಇಲಾಖೆ : ಪ್ರತಿಭೆಗಳ ಸಂಗಮ" ಎಂದೇ ಹೆಸರಿಟ್ಟು ಬರೆದಿದ್ದೇನೆ.

ನಮ್ಮ ವಾರ್ತಾ ಇಲಾಖೆಯನ್ನು ಇಂದಿನ ದಿನಮಾನಕ್ಕೆ ಅನುಗುಣವಾಗಿ ಕಾರ್ಪೊರೇಟ್ ಶೈಲಿಯಲ್ಲಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಮರು ರಚನೆ ಮಾಡಲು ಒಂದು ಪರಿಣಿತರ ಸಮಿತಿಯನ್ನು ರಚಿಸಿ ಕೊಡಬೇಕೆಂದು ನಾವು ಕೆಲವು ತಿಂಗಳ ಹಿಂದೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದೆವು.ನಿಮಗೆ ತಿಳಿದಿರಬಹುದು. ಸರ್ಕಾರ ನಮ್ಮ ಇಲಾಖೆಯ ಎಲ್ಲ ಪ್ರಸ್ತಾವಗಳನ್ನು ಸದಾ ಪುರಸ್ಕರಿಸುತ್ತಲೇ ಬಂದಿದೆ.ಎಂದಿನಂತೆ ಸರ್ಕಾರ ನಮ್ಮ ಈ ಪ್ರಸ್ತಾವನೆಯನ್ನು ಸಹ ಅಂಗೀಕರಿಸಿ ಹಿರಿಯ ನಿವೃತ್ತ ಐ ಎ ಎಸ್ ಅಧಿಕಾರಿ ಎಮ್ .ಆರ್ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ. ಇವರು ಬಹಳ ಹಿಂದೆ ವಾರ್ತಾ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದವರು. ಹಾಗೆಯೆ ಸಮಿತಿಯ ಇತರ ಸದಸ್ಯರಾಗಿ ಹಿರಿಯ ನಿವೃತ್ತ ಐ ಪಿ ಎಸ್ ಅಧಿಕಾರಿ ಎಸ್ ಕೃಷ್ಣಮೂರ್ತಿ , 'ದಿ ವೀ ಕ್ ' ಪತ್ರಿಕೆಯ ದೆಹಲಿಯ ನಿವಾಸಿ ಸಂಪಾದಕ ವಿ . ಸಚ್ಚಿದಾನಂದ ಮೂರ್ತಿ ,ಪ್ರಜಾವಾಣಿಯ ನಿವೃತ್ತ ಸಂಪಾದಕ ರಾಜಾ ಶೈಲೇಶ ಚಂದ್ರಗುಪ್ತ , ಪ್ರಜಾವಾಣಿಯ ಹಿರಿಯ ಪತ್ರಕರ್ತ ಎಮ್ ಎ ಎನ್ ಇಸ್ಮಾಯಿಲ್ ಇವರುಗಳಿದ್ದಾರೆ . ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ವಾರ್ತಾ ಇಲಾಖೆಯ ನಿರ್ದೇಶಕನಾದ ನಾನು ಇದ್ದೇನೆ.

ಈ ಸಮಿತಿಯ ಮುಂದೆ ನಮ್ಮ ಇಲಾಖೆಯ ಕಾರ್ಯವ್ಯಾಪ್ತಿ , ಕಾರ್ಯಶೈಲಿ ಇತ್ಯಾದಿಗಳ ಮಂಡನೆ ಮಾಡುವಾಗಲೆಲ್ಲಾ ನನಗೆ ಬಹಳ ಹೆಮ್ಮೆಯಾಗುತ್ತಿತ್ತು. ವಿಶೇಷವಾಗಿ ನಮ್ಮ ಇಲಾಖೆಯ ಕ್ಷೇತ್ರ ಪ್ರಚಾರ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದ ನಟ , ನಟಿಯರಾದ ಸಿ ಆರ್ ಸಿಂಹ , ಉಮಾ ಶಿವಕುಮಾರ್ , ಲೋಕೇಶ್ , ಆರ್ ನಾಗೇಶ್ , ಕಪ್ಪಣ್ಣ , ಭಾರತಿ, ಇವರು ವಾರ್ತಾ ಇಲಾಖೆಯ ಬಗ್ಗೆ ಜನರಲ್ಲಿ ಒಂದು ರೀತಿಯ ಹೆಮ್ಮೆ ಮೂಡಿಸಿದ್ದರು. ಈ ಬಗ್ಗೆ ಸಮಿತಿಯ ಅಧ್ಯಕ್ಷರಾದಿಯಾಗಿ ಎಲ್ಲರೂ ಪ್ರಶಂಸಿಸುತ್ತಿದ್ದರು . ನಮ್ಮ ಇಲಾಖೆಯ ಇತರ ಶಾಖೆಗಳಲ್ಲಿ ಕೂಡಾ ಹಲವಾರು ಪ್ರತಿಭಾವಂತರು ಕಾರ್ಯ ನಿರ್ವಹಿಸಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಮುಂದಿನ ಸಂಚಿಕೆಗಳಲ್ಲಿ ಅವುಗಳ ಬಗ್ಗೆ ನಾನು ಹೇಳುತ್ತೇನೆ.

ಈ ಮಾತುಗಳನ್ನೆಲ್ಲ ನಾನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಮೊನ್ನೆ ಸಮಿತಿ ಸಭೆ ಸೇರಿದ್ದಾಗ ನಮ್ಮ ಇಲಾಖೆಯ ಇತ್ತೀಚಿನ ಧ್ವನಿ ಬೆಳಕು ಕಾರ್ಯಕ್ರಮ " ಭಾರತ ಭಾಗ್ಯ ವಿಧಾತ " ದ ವಿಡಿಯೋವನ್ನು ಅವರಿಗಾಗಿ ಪ್ರದರ್ಶಿಸಿದೆವು. ಒಂದೂವರೆ ಘಂಟೆಯ ಈ ವಿಡಿಯೋವನ್ನು ಸಮಿತಿಯ ಸದಸ್ಯರು ಅತ್ತಿತ್ತ ತಿರುಗದಂತೆ ನೋಡಿದರು. ಪ್ರದರ್ಶನ ಮುಗಿದ ನಂತರ ನಮ್ಮ ಇಲಾಖೆಯ ಬಗ್ಗೆ ಮೆಚ್ಚುಗೆಯ ಸುರಿಮಳೆಗರೆದರು. ಆ ಸುರಿಮಳೆಯ ತಂಪು ತಮಗೂ ತಲುಪಬೇಕೆಂದು ಈ ಅಂಕಣದ ಮೂಲಕ ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಈವರೆಗೂ ನಡೆದಿರುವ ಸಭೆಗಳಲ್ಲಿ ನಮ್ಮ ಇಲಾಖೆಯ ಈವರೆಗಿನ ಕಾರ್ಯ ಶೈಲಿಯ ಬಗ್ಗೆ ಸಮಿತಿಗೆ ಸಮಾಧಾನವಿದೆ. ಆದರೆ ಇಲಾಖೆಗೆ ಇನ್ನೂ ಮಾಡಲು ನೂರಾರು ಕಾರ್ಯಗಳಿವೆ. ಸಮಾಧಾನದ ಸ್ಥಿತಿ ತಲುಪಿದೆವೆಂದರೆ ಅಲ್ಲಿಂದ ನಮ್ಮ ಅವನತಿ ಆರಂಭವಾಯಿತೆಂದೇ ಅರ್ಥ. ಈ ಎಚ್ಚರಿಕೆ ಸದಾ ನಮ್ಮಲ್ಲಿರ ಬೇಕು.

ಸದಾ ಹೊಸತಿಗಾಗಿ ಮನ ಮಿಡಿಯಬೇಕು ಕಾಯ ತುಡಿಯಬೇಕು ನೆನಹಲ್ಲಿ ಉಳಿವ ಕಾರ್ಯ ಆಗ ಆಯಿತು ನೋಡಾ .... ವಚನ ಶೈಲಿಯಲ್ಲಿ ಮೂಡಿಬಂದ ಈ ನನ್ನ ಆಶಯವನ್ನು ಆಗುಮಾಡುವ ಚೈತನ್ಯ ನಿಮ್ಮಲ್ಲಿದೆ ಎನ್ನುವ ವಿಶ್ವಾಸ ನನ್ನದು.

No 17, Vartha Soudha, Bhagwan Mahaveer Road (Infantry Road), Bengaluru - 560 001,
080-2202 8001, 2202 8002 080-22863794, 22028041 Copyright©2016,
Department of Information, Karnataka. All rights reserved.