ವಾರ್ತಾ ಇಲಾಖೆ ವಿಶಾಲ ಅರ್ಥದಲ್ಲಿ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ನೀತಿ ನಿಲುವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆ. ರಾಜ್ಯಮಟ್ಟದಲ್ಲಿ ವಾರ್ತಾ ಇಲಾಖೆಯು ನಿರ್ದೇಶಕರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತದೆ. ಜಿಲ್ಲ್ಲಾ ಮಟ್ಟದಲ್ಲಿ, ಉಪನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತವೆ.
ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಸ್ತುಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಬೀದಿ ನಾಟಕಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಪ್ರಮುಖ ಉತ್ಸವ, ಜಾತ್ರೆಗಳ ಸಂದರ್ಭದಲ್ಲಿ ಲೇಸರ್ ಪ್ರದರ್ಶನದ ಮೂಲಕ ವಿನೂತನವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಮೈಸೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನ, ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆ ನಿರ್ಮಾಣ ಹಾಗೂ ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಖ್ಯಾತಿಗೆ ಅನುಗುಣವಾಗಿ ಸ್ತಬ್ಧಚಿತ್ರ ನಿರ್ಮಿಸುವ ಹೊಣೆಗಾರಿಕೆಯನ್ನು ಇಲಾಖೆ ನಿರ್ವಹಿಸುತ್ತಿದೆ. ರಾಷ್ಟ್ರೀಯ ಹಾಗೂ ರಾಜ್ಯದ ಮಹತ್ವದ ಸಂದರ್ಭಗಳಲ್ಲಿ ಪತ್ರಿಕೆ, ರೇಡಿಯೋ, ಟೆಲಿವಿಷನ್‌ಗಳಲ್ಲಿ ಜಾಹೀರಾತು ನೀಡುವುದು ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಯಾಗಿದೆ.
ರಾಜ್ಯಾದ್ಯಂತ ಇಲಾಖೆಯ ಅಧೀನದಲ್ಲಿರುವ ಸುಮಾರು ಒಂದು ಸಾವಿರ ಹೆದ್ದಾರಿ ಫಲಕಗಳಲ್ಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಚಿತ್ರಣವನ್ನು ಬಿಂಬಿಸಲಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಕಿರುಹೊತ್ತಿಗೆ, ಮಡಿಕೆ ಪತ್ರ, ಭಿತ್ತಿಪತ್ರ ಮುದ್ರಿಸಿ ರಾಜ್ಯಾದ್ಯಂತ ವಿತರಿಸಲಾಗುತ್ತಿದೆ.
ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸಂಪರ್ಕ ಮತ್ತು ಸಂಯೋಜನೆ ಕಾರ್ಯವನ್ನು ವಾರ್ತಾ ಇಲಾಖೆ ನಿರ್ವಹಿಸುತ್ತಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಮಾನ್ಯತೆ ನೀಡುವುದು, ರಿಯಾಯಿತಿ ದರದಲ್ಲಿ ಬಸ್‌ಪಾಸ್ ನೀಡುವುದು, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಆರ್ಥಿಕ ನೆರವು ಒದಗಿಸುವುದು, ಮಾಶಾಸನ ಮಂಜೂರು ಮಾಡುವುದು, ಇಲಾಖೆಯ ಮಾಧ್ಯಮ ಸ್ನೇಹಿ ಕಾರ್ಯಕ್ರಮಗಳಾಗಿವೆ.
ಉತ್ತಮ ಕನ್ನಡ ಚಲನಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಮತ್ತು ಸಹಾಯಧನ ನೀಡುವ ಮೂಲಕ ಚಿತ್ರೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಾಹೀರಾತು ಮತ್ತು ಪ್ರಮುಖ ವಿಷಯ ಹಾಗೂ ವ್ಯಕ್ತಿಗಳನ್ನು ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿ ಟೆಲಿವಿಷನ್ ಮೂಲಕ ಪ್ರಸಾರ ಮಾಡಲಾಗುತ್ತಿದೆ.
ಮಾಹಿತಿತಂತ್ರಜ್ಞಾನ ಈಗ ವಿಶ್ವವ್ಯಾಪಿಯಾಗಿದೆ. ವಾರ್ತಾ ಇಲಾಖೆಯು ತನ್ನ ಸಮಗ್ರ ಕಾರ್ಯಚಟುವಟಿಕೆಗಳನ್ನು ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಲು ’ಐಟಿಹಬ್’ ಮಾಹಿತಿ ಜಾಲ ಯೋಜನೆಯನ್ನು ಹಮ್ಮಿಕೊಂಡಿದ್ದು ಯೋಜನೆಯ ಪ್ರಥಮ ಹಂತಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ.
ರೇಡಿಯೋ ಮಾಧ್ಯಮದಲ್ಲಿ ನೂತನ ಪರಿಕಲ್ಪನೆಯಾದ ’ಸಮುದಾಯ ರೇಡಿಯೋ’ ಕೇಂದ್ರಗಳ ಸ್ಥಾಪನೆಗೆ ಉತ್ತೇಜನ ನೀಡಲು ಇಲಾಖೆಯು ’ನಮ್ಮ ಬಾನುಲಿ’ ಯೋಜನೆಯನ್ನು ರೂಪಿಸಿದೆ. ಆಸಕ್ತ ಸಂಘ ಸಂಸ್ಥೆಗಳು ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಿಕೊಳ್ಳಲು ಸಹಾಯಧನ ನೀಡುವ ಈ ಯೋಜನೆ ರಾಷ್ಟ್ರದಲ್ಲೇ ಅಪರೂಪದ ಯೋಜನೆಯಾಗಿದೆ.
ವಾರ್ತಾ ಇಲಾಖೆ ಹಿನ್ನೆಲೆ
ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಸಮಗ್ರ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಆರಂಭಿಸಿ ರಾಷ್ಟ್ರದ ಅಭಿವೃದ್ಧಿಗಾಗಿ ಕೃಷಿ, ಕೈಗಾರಿಕೆ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ ವಲಯಗಳಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿತು. ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿತ್ತು. ಆದರೆ, ಅಂದಿನ ದಿನಗಳಲ್ಲಿ ಇದ್ದ ಅನಕ್ಷರತೆ ಪ್ರಚಾರಕ್ಕೆ ತೊಡಕಾಗಿತ್ತು. ಈ ಹಿನ್ನೆಲೆಯಲ್ಲಿ ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ಯೋಜನೆಯನ್ನು ರೂಪಿಸಿ ಪ್ರಚಾರ ಕಾರ್ಯಕೈಗೊಂಡಿತ್ತು. ರಾಜ್ಯ ಸರ್ಕಾರವು ಸಹ ರಾಜ್ಯದಲ್ಲಿ ಕೈಗೊಳ್ಳುತ್ತಿದ್ದ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿಕೆಗೆ ಇದೇ ಮಾರ್ಗ ಅನುಸರಿಸಿತ್ತು. ಮಾಹಿತಿ ಜೊತೆಗೆ ಜನತೆಯೂ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗುವಂತೆ ಮಾಡುವ ಪ್ರಯತ್ನ ಇದಾಗಿತ್ತು. ಈ ಉದ್ದೇಶದೊಂದಿಗೆ ರಾಜ್ಯದಲ್ಲಿ ವಾರ್ತಾ ಇಲಾಖೆಯನ್ನು ಆರಂಭಿಸಲಾಗಿತ್ತು.
ವಾರ್ತಾ ಇಲಾಖೆಗೆ ಆರು ದಶಕಗಳ ಸುದೀರ್ಘ ಇತಿಹಾಸವಿದೆ. ಇಂದಿನ ವಾರ್ತಾ ಇಲಾಖೆಯು ೧೯೪೯ರಲ್ಲಿ ಅಂದಿನ ಮೈಸೂರು ಸರ್ಕಾರದಲ್ಲಿ ಪ್ರಚಾರ ಇಲಾಖೆ ಹೆಸರಿನಲ್ಲಿ ಆರಂಭವಾಗಿತ್ತು. ೧೯೫೬ರಲ್ಲಿ ಮುಖ್ಯ ಮಂತ್ರಿಗಳ ಸಚಿವಾಲಯದ ವ್ಯಾಪ್ತಿಯಲ್ಲಿದ್ದ ವಾರ್ತಾ ಇಲಾಖೆಯು ಪ್ರಧಾನ ವಾರ್ತಾ ಅಧಿಕಾರಿ ಮತ್ತು ಓರ್ವ ಛಾಯಾಗ್ರಾಹಕ ಹಾಗೂ ಬೆರಳೆಣಿಕೆಯ ಸಿಬ್ಬಂದಿಯೊಂದಿಗೆ ಅಠಾರ ಕಚೇರಿಯಲ್ಲಿ (ಇಂದಿನ ಹೈಕೋರ್ಟ್ ಕಟ್ಟಡದಲ್ಲಿ) ಕಾರ್ಯನಿರ್ವಹಿಸುತ್ತಿತ್ತು. ಮುಖ್ಯ ಮಂತ್ರಿಯವರ ಕಚೇರಿಯ ಅವಶ್ಯಕತೆಗೆ ಅನುಗುಣವಾಗಿ ಪತ್ರಿಕಾ ಪ್ರಕಟಣೆಗಳ ಬಿಡುಗಡೆ ಮತ್ತು ಇತರೆ ಪ್ರಚಾರ ಕಾರ್ಯಗಳನ್ನು ಈ ಕಚೇರಿ ನಿರ್ವಹಿಸುತ್ತಿತ್ತು. ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆ ಎಂದು ಪರಿವರ್ತನೆಯಾಗಿ ಇಲಾಖೆಯ ಮುಖ್ಯಸ್ಥರಾಗಿ ನಿರ್ದೇಶಕರ ಹುದ್ದೆ ಸೃಜನೆಯಾಯಿತು. ಜೊತೆಗೆ, ಮತ್ತಷ್ಟು ಸಿಬ್ಬಂದಿ ವರ್ಗ ಈ ಅವಧಿಯಲ್ಲಿ ಸೇರ್ಪಡೆಗೊಂಡಿತ್ತು. ಕೆಲವೇ ವರ್ಷಗಳಲ್ಲಿ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿ ಮತ್ತೊಮ್ಮೆ ಬದಲಾವಣೆಗೊಂಡಿತ್ತು. ಆಯ್ದ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಆರಂಭಿಸಲಾಗಿತ್ತು. ರಾಜ್ಯಗಳು ಏಕೀಕರಣಗೊಂಡ ಅವಧಿಯಲ್ಲಿ ಮುಂಬೈ-ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕದ ಕೆಲವು ಭಾಗಗಳು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದವು. ಈ ಭಾಗಗಳಲ್ಲೂ ಇಲಾಖೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತು.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದರ ಈ ಹಿನ್ನೆಲೆಯಲ್ಲಿ ೧೯೭೪ರಲ್ಲಿ ಪ್ರವಾಸೋದ್ಯಮವನ್ನು ವಾರ್ತಾ ಇಲಾಖೆಯಿಂದ ಪ್ರತ್ಯೇಕಿಸಲಾಯಿತು. ಬಳಿಕ ವಾರ್ತಾ ಮತ್ತು ಪ್ರಚಾರ ಇಲಾಖೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇಂದು ’ವಾರ್ತಾ ಇಲಾಖೆ’ ಹೆಸರಿನಲ್ಲಿ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.
ಅಠಾರ ಕಚೇರಿಯಲ್ಲಿ ಆರಂಭಗೊಂಡ ವಾರ್ತಾ ಇಲಾಖೆಯು, ವಿಧಾನ ಸೌಧದಲ್ಲಿ ಕೆಲ ಕಾಲ ನೆಲೆ ನಿಂತಿತ್ತು. ಆ ಬಳಿಕ ಬೆಂಗಳೂರಿನ ಹೈಗ್ರೌಂಡ್ಸ್ ಬಳಿ ಇರುವ ಬಾಲಬ್ರೂಯಿಗೆ ಸ್ಥಳಾಂತರಗೊಂಡಿತ್ತು. ನಂತರ ಇನ್‌ಫೆಂಟ್ರಿ ರಸ್ತೆಗೆ ವರ್ಗಾವಣೆಯಾಗಿತ್ತು. ಇಲ್ಲಿಂದ ಅಲ್ಪಾವಧಿಗೆ ಶಿವಾಜಿನಗರದಲ್ಲಿ ತಾತ್ಕಾಲಿಕವಾಗಿ ನೆಲೆಕಂಡುಕೊಂಡಿತ್ತು. ಈಗ ಭಗವಾನ್ ಮಹಾವೀರ ರಸ್ತೆಯಲ್ಲಿ (ಇನ್‌ಫೆಂಟ್ರಿ ರಸ್ತೆ) ಹಳೆ ಕಟ್ಟಡವಿದ್ದ ಸ್ಥಳದಲ್ಲೇ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಇಲಾಖೆಯ ಕಾರ್ಯಚಟುವಟಿಕೆಗಳು ಇಲ್ಲಿಂದಲೇ ನಡೆಯುತ್ತಿವೆ
ಇಲಾಖೆಯ ವಿಳಾಸ:
ನಿರ್ದೇಶಕರು,
ವಾರ್ತಾ ಇಲಾಖೆ,
ನಂ. ೧೭, ’ವಾರ್ತಾ ಸೌಧ’,
ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ),
ಬೆಂಗಳೂರು. ೫೬೦೦೦೧.
ದೂರವಾಣಿ: ೦೮೦-೨೨೦೨೮೦೦೧/೦೨
ಫ್ಯಾಕ್ಸ್ : ೦೮೦-೨೨೦೨೮೦೪೧ / ೨೨೮೬೩೭೯೪
|